ಆ ಹುಡುಗ ಆರನೆಯ ತರಗತಿಯಲ್ಲಿ ಓದುತಿದ್ದ. ಅಪ್ಪ ಅಮ್ಮನ ಏಕೈಕ ಪುತ್ರ. ಅಪ್ಪ ಅಮ್ಮ ಇಬ್ಬರು ಅಪ್ಪಟ ಕನ್ನಡಿಗರು ಮತ್ತು ತುಂಬ ವಿದ್ಯಾವಂತರು. ಅಪ್ಪ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಮಗನನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು. ಈತ ಮಗುವಾಗಿದ್ದಾಗ ಮಾತು ಬಂದಿದ್ದೆ ತುಂಬ ತಡವಾಗಿ. ತುಂಬ ಚೂಟಿಯಾದರೂ ನಾಲ್ಕು ವರ್ಷವಾದರೂ ಕೂಡ ಅಪ್ಪ-ಅಮ್ಮ ಎಂಬ ಎರಡು ಶಬ್ದಗಳು ಕೂಡ ಸರಿಯಾಗಿ ಬರುತ್ತಿರಲಿಲ್ಲ. ಇವನ ವಯಸ್ಸಿನ ಬೇರೆ ಮಕ್ಕಳು ಆಗಲೇ ಡ್ಯಾಡಿ-ಮಮ್ಮಿ ಎನ್ನಲು ಕೂಡ ಕಲಿತಿದ್ದರು. ಹೀಗಾಗಿ ಅವನು ಅಪ್ಪ-ಅಮ್ಮ ಎಂದು ಸರಿಯಾಗಿ ಕರೆಯಲು ಕಲಿತಾಗ ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು! ಅಪ್ಪ-ಅಮ್ಮ ಎಂದು ಅವನಿಂದ ಮತ್ತೆ ಮತ್ತೆ ಕೇಳಿ ಆನಂದ ಪಟ್ಟಿದ್ದರು. ದೇವರ ದಯೆಯಿಂದ ಹುಡುಗ ತುಂಬಾ ಚೂಟಿ ಮತ್ತು ಬುದ್ದಿವಂತನಾಗಿದ್ದರಿಂದ ನಂತರ ಮಾತನಾಡುವುದನ್ನು ಬಲು ಬೇಗನೆ ಕಲಿತನು. ಮಗ ಚೆನ್ನಾಗಿ ಆಂಗ್ಲ ಭಾಷೆ ಕಲಿಯಬೇಕೆಂದು ಪ್ರತಿಷ್ಟಿತ ಕಾನ್ವೆಂಟ್ ಗೆ ಸೇರಿಸಿದರು. ಸೇರಿದ ಮೊದಲ ದಿನವೇ ಮನೆಗೆ ಬಂದು Daddy-Mummy ಎಂದು ಕರೆಯಲು ಆರಂಭಿಸಿದನು. ಇವನ ಅಪ್ಪ-ಅಮ್ಮನ ಆನಂದಕ್ಕೆ ಪಾರವೇ ಇರಲಿಲ್ಲ. ಅಪ್ಪ-ಅಮ್ಮ ಎಂದು ಕರೆಯಲು ೪ ವರ್ಷ ತಗೆದುಕೊಂಡ ಇವನು ಶಾಲೆಯಲ್ಲಿ ಮೊದಲ ದಿನವೇ Daddy-Mummy ಎನ್ನಲು ಕಲಿತಿದ್ದು ಆವರ ಸಂತೋಷ ಇಮ್ಮಡಿಯಾಗಲು ಕಾರಣವಾಗಿತ್ತು. ಅಂದಿನಿಂದ ಅಪ್ಪ-ಅಮ್ಮನ ಜಾಗದಲ್ಲಿ Daddy-Mummy ಬಂದು ಕುಳಿತುಕೊಂಡಿತು. ಹುಡುಗ ಕ್ಲಾಸಿನಲ್ಲಿ ಓದಿನಲ್ಲಿ ಎಲ್ಲರಿಗಿಂತ ಮುಂದು. ಹೀಗಾಗಿ ಸಹಜವಾಗಿ ಎಲ್ಲ ಟೀಚರ್ ಗಳ ಅಚ್ಚುಮೆಚ್ಚು. ಹೀಗೆ ೩-೪ ವರ್ಷ ಸಾಗಿತು. ಹುಡುಗ ಈಗ ೫ ನೇ ತರಗತಿಯಲ್ಲಿದ್ದನು. ಒಂದು ದಿನ ಇದ್ದಕ್ಕಿದ್ದಂತೆ Daddy-Mummy ಬಿಟ್ಟು Dad-Mom ಅನ್ನಲು ಶುರು ಮಾಡಿದ್ದನು. ಕೇಳಿದರೆ ಕ್ಲಾಸಿನಲ್ಲಿ ಅವನ ಸಹಪಾಟಿಗಳೆಲ್ಲ ಅವರ ತಂದೆ-ತಾಯಂದಿರನ್ನು ಹೀಗೆ ಕರೆಯುತ್ತಾರೆಂದು ಹೇಳಿದನು. ಹೀಗೆ ಡ್ಯಾಡಿ-ಮಮ್ಮಿಗೆ ಡ್ಯಾಡ್-ಮಾಮ್ ಎಂದು ಬಡ್ತಿ ಸಿಕ್ಕಿತು! ಮಗನ ಬುದ್ದಿವಂತಿಕೆಯನ್ನು ನೋಡಿ ಇವನ ಅಮ್ಮ ಮನಸ್ಸಿನಲ್ಲೇ ಎಲ್ಲಾ ದೇವರುಗಳಿಗೆ ವಂದಿಸಿದರು! ಮನೆಯಲ್ಲಿ ಮಗನ ಜೊತೆ ಮಾತುಗಳೆಲ್ಲ ಬರೀ ಆಂಗ್ಲ ಭಾಷೆಯಲ್ಲೇ ನಡೆಯುತ್ತಿತ್ತು. ಹೀಗೆ ಒಂದು ದಿನ ಮಗನು ಅಪ್ಪ-ಅಮ್ಮನ ಬಳಿ ಬಂದು - "Dad-Mom, There is kannada speech competition for kannada rajyotsava day function. My class teacher has shortlisted my name forr the competition. Can you write one very good speech for me? I have to win first prize!" ಹುಡುಗನ ಅಪ್ಪ ಹೇಳಿದನು- " Dont worry my son, I will write and give you such a speech that you will win nothing but first prize in the competition". ಹುಡುಗನ ಅಪ್ಪ ಅವರ ಕಛೇರಿಯ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು ಮತ್ತು ಕನ್ನಡ ಭಾಷೆಯ ಮೇಲೆ ತಕ್ಕ ಮಟ್ಟಿಗೆ ಹಿಡಿತ ಕೂಡ ಇತ್ತು. ಹೀಗಾಗಿ ತಮ್ಮ ಮಗನಿಗೆ ಒಳ್ಳೆಯ ಭಾಷಣವನ್ನೆ ಬರೆದು ಕೊಟ್ಟರು. ಮಗನು ಕೂಡ ಅದನ್ನು ಚೆನ್ನಾಗಿ ಉರು ಹೊಡೆದು ನಿರೀಕ್ಷೆಯಂತೆ ಕನ್ನಡ ರಾಜ್ಯೋತ್ಸವ ದಿನದಂದು ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಗಿಟ್ಟಿಸಿದನು. ಮಗನ ಭಾಷಣ ಕೇಳಿ ಅಲ್ಲಿದ್ದ ಎಲ್ಲರೂ ಇವರ ಮಗನನ್ನು ಹೊಗಳಿದ್ದೇ ಹೊಗಳಿದ್ದು. ಹುಡುಗನ ಅಪ್ಪ ಅವನ ಅಮ್ಮನ ಕಿವಿಯಲ್ಲಿ - "ಮುಂದಿನ ವಾರ ನಮ್ಮ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಕೂಡ ಇವನ ಭಾಷಣ ಮಾಡಿಸಬೇಕು" ಎಂದು ಉಸುರಿದರು. ಕೊನೆಯಲ್ಲಿ ಕಾರ್ಯಕ್ರಮದ ಸಂಘಟಕರು ಪ್ರಶಸ್ತಿಯನ್ನು ಕೊಡಲು -" May I call upon ..... to come up and collect first prize for kannada speech competition ....." ಎಂದು ಹೇಳುವಾಗ ಕುವೆಂಪುರವರ " ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ..." ಹಾಡು ಸ್ಪೀಕರ್ ನಲ್ಲಿ ಮೊಳಗತೊಡಗಿತು ಮತ್ತು ಕನ್ನಡ ಬಾವುಟವು ಗಾಳಿಗೆ ಪಟ ಪಟ ಪಟ ಎಂದು ಬಡಿದುಕೊಳ್ಳುತಿತ್ತು..
3 comments:
ನಿಮ್ಮ ಬರಹ ಶೈಲಿ ಚೆನ್ನಾಗಿದೆ... ಸದಾ ಬರೆಯುತ್ತಿರಿ
ಬಹಳ ಧನ್ಯವಾದಗಳು ದಿವ್ಯಾ!
Chennagide...pradeep sir...
Post a Comment